ಚಿಕಲ್ -
ಸಪೋಟೇಸೀ ಕುಟುಂಬಕ್ಕೆ ಸೇರಿದ ಸಪೋಟ (ಚಿಕು) ಗಿಡದಿಂದ ಪಡೆಯಲಾಗುವ ಹಾಲ್ನೊರೆಯನ್ನು (ಲೇಟೆಕ್ಸ್) ಗರಣೆಗಟ್ಟಿಸಿ ತಯಾರಿಸಿದ ವಸ್ತು. ಪಲೇಕ್ಷಿಯಮ್ ಗಟ ಎಂಬ ಸಸ್ಯದಿಂದ ದೊರೆಯುವ ಗಟಪರ್ಚದಂತೆಯೇ (ನೋಡಿ- ಗಟಪರ್ಚ) ಚಿಕಲ್ ಕೂಡ ಇದೆಯಾಗಿ ಇದನ್ನೂ ಚೂಯಿಂಗ್ ಗಮ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸಪೋಟ ಗಿಡದ ಕಾಂಡದ ಮೇಲೆ ವಂಕಿವಂಕಿಯಾದ ಸೀಳು ಗಾಯಗಳನ್ನು ಮಾಡಿ ಹಾಲ್ನೊರೆಯನ್ನು ಜಿನುಗಿಸಿ ಗಿಡದ ಬುಡದಲ್ಲಿ ಕಟ್ಟಿರುವ ರಬ್ಬರ್ ಲೇಪಿತ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ಅನಂತರ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಇದನ್ನು ಹಾಕಿ ಕುದಿಸಿ ಇದರ ನೀರಿನ ಅಂತ 33 ಕ್ಕೆ ಇಳಿಯುವಂತೆ ಮಾಡಲಾಗುತ್ತದೆ. ಆಗ ಹಾಲ್ನೊರೆ ಅರೆಘನ ಸ್ಥಿತಿಗೆ ಬರುತ್ತದೆ. ಆಮೇಲೆ ಇದನ್ನು ಮರದ ಧಾರಕಗಳಲ್ಲಿ ಹಾಕಿ ತಲಾ 25 ಪೌಂ. ತೂಕದ ಕೊರಡುಗಳಾಗಿ ಎರಕ ಒಯ್ಯಲಾಗುತ್ತದೆ. ಇಂಥ ಕೊರಡುಗಳಿಗೆ ಮಾರಿಸೆಟಾಗಳೆಂದು ಹೆಸರು. ಸಾಗಣೆಯ ಅನುಕೂಲಕ್ಕಾಗಿ ನಾಲ್ಕು ನಾಲ್ಕು ಕೊರಡುಗಳನ್ನು ಒಟ್ಟಿಗೆ ಕಟ್ಟುವುದುಂಟು. ಚೂಯಿಂಗ್ ಗಮ್ ತಯಾರಿಕೆಗೆ ಬಳಸುವಾಗ ಮಾರಿಸೆಟಾಗಳನ್ನು ಸಣ್ಣ ಸಣ್ಣ ತುಣುಕುಗಳಾಗಿ ಕತ್ತರಿಸಿ ಪ್ರಬಲ ಕ್ಷಾರದಿಂದಲೂ ಸೋಡಿಯಮ್ ಆಸಿಡ್ ಫಾಸ್ಫೇಟಿನಿಂದಲೂ ಚೆನ್ನಾಗಿ ತೊಳೆದು ಒಣಗಿಸಿ ಪುಡಿ ಮಾಡಲಾಗುತ್ತದೆ. ಇದರಿಂದ ದೊರೆಯುವ ಅಂತಿಮ ಉತ್ಪನ್ನ ನೀರಿನಲ್ಲಿ ಕರಗದು; ಬಿಸಿಗೊಳಿಸಿದಾಗ ಬಲು ಅಂಟುಅಂಟಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಚಿಕಲಿನ ಬಳಕೆ ಅತಿಹೆಚ್ಚು.
(ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ